ಕೋವಿಡ್‌ ಅವಧಿಯಲ್ಲಿ ಮೋದಿಯ ವಾರಣಾಸಿ ಕಂಡ ಸಾವು ನೋವು: ಬೆಚ್ಚಿಬೀಳಿಸುವ ವರದಿ ಬಹಿರಂಗ naanugauri.com

15, Feb 2022 | ಅನುವಾದಿತ ಲೇಖನ

ಪ್ರಧಾನಿ ಮೋದಿ ಪ್ರತಿನಿಧಿಸುವ ಪೂರ್ವ ಯುಪಿಯ ವಾರಣಾಸಿಯಲ್ಲಿ ಕೈಗೊಂಡ ಸಮೀಕ್ಷೆಯು ಬೆಚ್ಚಿ ಬೀಳಿಸಿದೆ. ಕೋವಿಡ್‌ ಅವಧಿಯಲ್ಲಿ ಉತ್ತರ ಪ್ರದೇಶವು ಹೆಚ್ಚಿನ ಸಾವು ನೋವು ಕಂಡಿರುವುದನ್ನು ಸಿಜೆಪಿ ವರದಿ ಚರ್ಚಿಸಿದೆ.

(ಈ ವರದಿಯು ಪ್ರಖ್ಯಾತ ಸುದ್ದಿ ಜಾಲತಾಣ ‘ದಿ ವೈರ್‌‌’ನಲ್ಲಿ ಪ್ರಕಟವಾಗಿದೆ. ಈ ವರದಿಯನ್ನು ಸಿದ್ಧಪಡಿಸಲು ಸಹಾಯ ಮಾಡಿದ ‘ಮುರಾದ್ ಬನಾಜಿ’ ಅವರಿಗೆ ದಿ ವೈರ್ ಕೃತಜ್ಞತೆ ಸಲ್ಲಿಸಿದೆ.)

ಮಾನವ ಹಕ್ಕುಗಳ ಸಂಸ್ಥೆಯಾದ ಸಿಟಿಜನ್‌ ಫಾರ್‌ ಜಸ್ಟೀಸ್‌ ಅಂಡ್‌ ಫೀಸ್‌ (ಸಿಜೆಪಿ) ಹಾಗೂ ಸ್ವತಂತ್ರ ತಜ್ಞರು ಸಂಗ್ರಹಿಸಿ, ವಿಶ್ಲೇಷಿಸಿದ ದತ್ತಾಂಶಗಳು ಮಹತ್ವದ ಸಂಗತಿಯೊಂದನ್ನು ಬಿಚ್ಚಿಟ್ಟಿವೆ. ಪ್ರಧಾನಿ ನರೇಂದ್ರ ಮೋದಿಯವರ ತವರು ಜಿಲ್ಲೆಯಾದ ವಾರಣಾಸಿಯನ್ನು ಹೊಂದಿರುವ ಪೂರ್ವ ಉತ್ತರ ಪ್ರದೇಶದ ಪೂರ್ವಂಚಲ ಭಾಗದಲ್ಲಿ ಅತಿಹೆಚ್ಚಿನ ಜನರು ಕೋವಿಡ್ ಸಾಂಕ್ರಾಮಿಕದ ವೇಳೆ ಸಾವಿಗೀಡಾಗಿದ್ದಾರೆ ಎಂದು ವರದಿ ವಿಶ್ಲೇಷಿಸಿದೆ.

ಸಮೀಕ್ಷೆ ನಡೆಸಿದ ಪ್ರದೇಶದ ಅಂಕಿ ಅಂಶಗಳು ಹೇಳುವುದೇನೆಂದರೆ “ಜನವರಿ 2020ರಿಂದ ಆಗಸ್ಟ್‌ 2021ರವರೆಗೆ ದಾಖಲಾದ ಸಾವಿನ ಪ್ರಮಾಣವು 2019ರ ದಾಖಲೆಗೆ ಹೋಲಿಕೆ ಮಾಡಿದರೆ ಶೇ. 60ರಷ್ಟು ಹೆಚ್ಚಾಗಿದೆ”. ಇದು ಸರ್ಕಾರಿ ದಾಖಲೆಗಳನ್ನು ಆಧರಿಸಿ ಮಾಡಿದ ವರದಿಯಾಗಿದೆ.

ಈ ಪ್ರದೇಶದಲ್ಲಿನ ಸಾವಿನ ಪ್ರಮಾಣವು ಉತ್ತರ ಪ್ರದೇಶದ ಇತರ ಭಾಗದಲ್ಲಿಯೂ ಪುನರಾವರ್ತನೆಯಾಗಿದ್ದರೆ ಇಡೀ ರಾಜ್ಯದಲ್ಲಿ ಕೋವಿಡ್‌ ಸಮಯದಲ್ಲಿ ಸುಮಾರು 14 ಲಕ್ಷ (1.4 ಮಿಲಿಯನ್‌) ಜನ ಸತ್ತಿದ್ದಾರೆ ಎನ್ನಬಹುದು. ಉತ್ತರ ಪ್ರದೇಶ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ, ಕೋವಿಡ್ ಸಮಯದಲ್ಲಿ 23,000 ಜನರು ಸತ್ತಿದ್ದಾರೆ. ಇದನ್ನು ಅರವತ್ತು ಪಟ್ಟು ಹೆಚ್ಚಿಸಿದರೆ? ಇದು ಸಾಂಕ್ರಾಮಿಕ ಸಮಯದಲ್ಲಿ ಉತ್ತರ ಪ್ರದೇಶವು ಇಡೀ ದೇಶದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾಗುತ್ತದೆ. ಮತ್ತೊಂದು ಅಂಶವೇನೆಂದರೆ ಇಲ್ಲಿನ ಸಾವಿನ ದಾಖಲಾತಿಯು ಸೀಮಿತವಾದದ್ದು!

ಭಾರತದಾದ್ಯಂತ, ಕೋವಿಡ್-19 ಸಾಂಕ್ರಾಮಿಕ ರೋಗವು ಭಾರೀ ಪ್ರಮಾಣದಲ್ಲಿ ಏರಿಕೆಯಾಯಿತು. ಆದಾಗ್ಯೂ, ಅಧಿಕೃತ ಅಂಕಿಅಂಶಗಳು ತೀವ್ರ ಹಾನಿಗೊಳಗಾದ ಪ್ರದೇಶಗಳನ್ನು ಮಾತ್ರ ಪ್ರತಿಫಲಿಸುತ್ತವೆ. ಭಾರತದಲ್ಲಿ ಕೋವಿಡ್-19 ಸೋಂಕಿನಿಂದಾದ ಸಾವುಗಳು ತೀರಾ ಕಡಿಮೆ ಪ್ರಮಾಣದಲ್ಲಿ ವರದಿಯಾಗಿವೆ ಎಂದು ಅನೇಕ ಸ್ವತಂತ್ರ ವರದಿಗಳು ಹಾಗೂ ಅಧ್ಯಯನಗಳಿಂದ ನಮಗೆ ಈಗ ತಿಳಿದಿದೆ. ನಾಗರಿಕ ನೋಂದಣಿ ಅಂಕಿಅಂಶಗಳು ಮತ್ತು ವಿವಿಧ ಸಮೀಕ್ಷೆಗಳ ಡೇಟಾವನ್ನು ಒಳಗೊಂಡ ಶೈಕ್ಷಣಿಕ ಅಧ್ಯಯನಗಳ ಪ್ರಕಾರ ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಸಾಂಕ್ರಾಮಿಕದಿಂದ ಸತ್ತಿದ್ದಾರೆ.

ಆದಾಗ್ಯೂ, ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಾದ ಮರಣಕ್ಕೆ ಸಂಬಂಧಿಸಿದ ಮಾಹಿತಿಯು ಸೀಮಿತ ವ್ಯಾಪ್ತಿಯದ್ದಾಗಿದೆ. ಅಧಿಕೃತ ದಾಖಲೆಯ ಪ್ರಕಾರ ಉತ್ತರಪ್ರದೇಶದಲ್ಲಿ ಕೋವಿಡ್ 19 ಸೋಂಕಿನಿಂದ ಸತ್ತವರ ಸಂಖ್ಯೆ 23,000. “ಕೋವಿಡ್‌ ಬಿಕ್ಕಟ್ಟಿಗೆ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಕೈಗೊಂಡಿದ್ದಕ್ಕೆ ರಾಜ್ಯಕ್ಕೆ ಧನ್ಯವಾದಗಳು. ಕೋವಿಡ್ ಸೋಂಕು ಉತ್ತರ ಪ್ರದೇಶದ ಮೇಲೆ ಕಡಿಮೆ ಪರಿಣಾಮವನ್ನು ಬೀರಿದೆ” ಎಂದು ಐಐಟಿ ಕಾನ್ಪುರ ವರದಿ ಹೇಳುತ್ತದೆ.

ಮತ್ತೊಂದೆಡೆ ಮಾಧ್ಯಮದ ವರದಿಗಳು ಬೇರೆ ಸಂಗತಿಗಳನ್ನು ಹೇಳುತ್ತವೆ. ಅದರಲ್ಲೂ ಎರಡನೇ ಅಲೆಯಲ್ಲಿ ಮೇ 2021ರ ಸಂದರ್ಭದಲ್ಲಿ ಸಾವುಗಳು ಹೆಚ್ಚಾಗಿದ್ದು, ಆಕ್ಸಿಜನ್ ಸಿಗದೆ ಜನರು ನರಳಾಡಿದ್ದು, ಗಂಗಾ ನದಿಯ ತಟದಲ್ಲಿ ಹೆಣಗಳ ರಾಶಿ ಗೋಚರಿಸಿದ್ದು… ಎಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿವೆ.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಗಂಗಾ ನದಿಯ ತಟದಲ್ಲಿ ಕಂಡು ಬಂದ ಹೆಣಗಳ ರಾಶಿ (PC: PTI)

ಅಧಿಕೃತ ಪ್ರತಿಪಾದನೆಗಳು ಮತ್ತು ಗ್ರೌಂಡ್‌ ರಿಪೋರ್ಟ್‌ಗಳು ಸಂಪೂರ್ಣವಾಗಿ ಬೇರೆ ಕಥೆಯನ್ನೇ ಹೇಳುತ್ತವೆ. ಸತ್ಯ ಎಲ್ಲಿದೆ?

ಉತ್ತರ ಪ್ರದೇಶದಲ್ಲಿ COVID-19 ಸಾವುಗಳ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಸಾರ್ವಜನಿಕವಾಗಿ ಲಭ್ಯವಿರುವ ಅಂಕಿ-ಅಂಶವನ್ನು ಕೆದಕಲು ನಿರ್ಧರಿಸಿದೆವು.

ನವೆಂಬರ್-ಡಿಸೆಂಬರ್ 2021ರ ಅವಧಿಯಲ್ಲಿ, ಉತ್ತರ ಪ್ರದೇಶದ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (CJP) ತಂಡವು 2017ರಿಂದ ಆಗಸ್ಟ್ 2021 ರವರೆಗೆ ಸಾವಿನ ದಾಖಲೆಗಳನ್ನು ಸಂಗ್ರಹಿಸಲು ಮುಂದಾಯಿತು. ಪೂರ್ವಯುಪಿಯ ಪೂರ್ವಾಂಚಲ ಪ್ರದೇಶದ ಗ್ರಾಮಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ಥಳೀಯ ಕಚೇರಿಗಳಿಂದ ದತ್ತಾಂಶ ಪಡೆಯಲಾಗಿದೆ. ವಾರಣಾಸಿ ಮತ್ತು ಗಾಜಿಪುರ ಜಿಲ್ಲೆಗಳ 129 ಪ್ರದೇಶಗಳಿಂದ ಸಂಪೂರ್ಣ ದಾಖಲೆಗಳನ್ನು ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

ಈ ದತ್ತಾಂಶದ ವಿಶ್ಲೇಷಣೆಯು ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020-2021ರಲ್ಲಿ ದಾಖಲಾದ ಸಾವುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ತೋರಿಸುತ್ತದೆ.

ಎಲ್ಲಾ ಸಾವುಗಳು COVID-19ಗೆ ನಿರ್ಣಾಯಕವಾಗಿ ಕಾರಣವೆಂದು ಹೇಳಲಾಗದಿದ್ದರೂ, ಮರಣದ ಭಾರೀ ಹೆಚ್ಚಳದಲ್ಲಿ ಸಾಂಕ್ರಾಮಿಕವು ಪ್ರಮುಖ ಪಾತ್ರ ವಹಿಸಿದೆ ಎಂದು ತೀರ್ಮಾನಿಸುವುದು ಸಮಂಜಸವಾಗಿದೆ.

ಮಾಹಿತಿ ಸಂಗ್ರಹ

ನಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಸಾವಿನ ದಾಖಲೆಗಳನ್ನು ಸಂಗ್ರಹಿಸುವಾಗ ನಮ್ಮ ತಂಡಗಳು ಅನೇಕ ಸವಾಲುಗಳನ್ನು ಎದುರಿಸಿದವು. ವಾರಣಾಸಿ, ಘಾಜಿಪುರ್, ಜೌನ್‌ಪುರ್ ಮತ್ತು ಚಂದೌಲಿ ಎಂಬ ನಾಲ್ಕು ಜಿಲ್ಲೆಗಳ ಹಲವು ಪ್ರದೇಶಗಳಿಂದ ದತ್ತಾಂಶವನ್ನು ಪಡೆಯಲು ಪ್ರಯತ್ನಿಸಿದರೂ, ಅಂತಿಮವಾಗಿ ನಾವು ಸಂಗ್ರಹಿಸಲು ಸಾಧ್ಯವಾದ ಹೆಚ್ಚಿನ ಮಾಹಿತಿಯು ವಾರಣಾಸಿ ಮತ್ತು ಗಾಜಿಪುರ ಜಿಲ್ಲೆಗಳಿಗೆ ಸಂಬಂಧಿಸಿವೆ.

ದತ್ತಾಂಶವನ್ನು ಸಂಗ್ರಹಿಸುವುದಕ್ಕಾಗಿ ನಮ್ಮ ತಂಡವು ನಗರ ನಿಗಮ ಕಚೇರಿಗಳು, ಗ್ರಾಮ ಪಂಚಾಯತ್ ಕಚೇರಿಗಳು, ದಹನದ ಸ್ಥಳಗಳು, ಸ್ಮಶಾನಗಳನ್ನು ಸಂಪರ್ಕಿಸಿತು. ಗ್ರಾಮದ ಮುಖ್ಯಸ್ಥರು, ಕಾರ್ಯದರ್ಶಿಗಳು, ಆಶಾ ಕಾರ್ಯಕರ್ತರ ಸಹಾಯವನ್ನು ಕೋರಲಾಯಿತು. ಸಾವಿನ ದಾಖಲೆಗಳನ್ನು ನಿರ್ವಹಿಸದ ಕಾರಣ ಅಥವಾ ಅವುಗಳನ್ನು ಹಂಚಿಕೊಳ್ಳದ ಕಾರಣ ಅನೇಕ ಪ್ರದೇಶಗಳಲ್ಲಿ, ಯಾವುದೇ ದತ್ತಾಂಶವನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ನಾವು 147 ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ 2017ರಿಂದ ಆಗಸ್ಟ್ 2021ರ ಅವಧಿಯ ಭಾಗಶಃ ಅಥವಾ ಸಂಪೂರ್ಣ ಸಾವಿನ ದಾಖಲೆಗಳನ್ನು ಪಡೆಯಲು ಸಾಧ್ಯವಾಯಿತು. ವಿಶೇಷವಾಗಿ ವಾರಣಾಸಿ ಜಿಲ್ಲೆಯಲ್ಲಿ ನಾವು ದತ್ತಾಂಶವನ್ನು ಯಶಸ್ವಿಯಾಗಿ ಪಡೆಯಲು ಗ್ರಾಮಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ನೀಡಿದ ಸಹಕಾರ ಸ್ಮರಣೀಯ.

ಇಲ್ಲಿನ ವಿಶ್ಲೇಷಣೆಗೆ 2017ರಿಂದಾದ ಸಂಪೂರ್ಣ ದಾಖಲೆಗಳನ್ನು ಮಾತ್ರ ಬಳಸಲಾಗಿದೆ. ಪ್ರತಿ ವರ್ಷದ ದಾಖಲೆಗಳನ್ನು ಹೊಂದಿರದ 17 ಪ್ರದೇಶಗಳನ್ನು ಮತ್ತು ಜನಸಂಖ್ಯೆಯ ದತ್ತಾಂಶವನ್ನು ಕಂಡುಹಿಡಿಯಲಾಗದ ಒಂದು ಪ್ರದೇಶವನ್ನು ವಿಶ್ಲೇಷಣೆಯಿಂದ ಹೊರಗಿಡಲಾಗಿದೆ. ಉಳಿದ 129 ಪ್ರದೇಶಗಳ ಡೇಟಾವನ್ನು ನಾವು ವಿಶ್ಲೇಷಿಸಿದ್ದೇವೆ. 79 ಗ್ರಾಮೀಣ ಪ್ರದೇಶಗಳ, 50 ನಗರ ಪ್ರದೇಶಗಳ ದತ್ತಾಂಶಗಳು ಇಲ್ಲಿ ಬಳಕೆಯಾಗಿವೆ. ಇವುಗಳಲ್ಲಿ 104 ಪ್ರದೇಶಗಳು ವಾರಣಾಸಿಗೆ, 23 ಪ್ರದೇಶಗಳು ಘಾಜಿಪುರಕ್ಕೆ ಸಂಬಂಧಿಸಿವೆ. ತಲಾ ಒಂದು ಪ್ರದೇಶ- ಜೌನ್‌ಪುರ ಮತ್ತು ಚಂದೌಲಿ ಜಿಲ್ಲೆಗಳಿಗೆ ಸೇರಿವೆ.

ನಮ್ಮ ವಿಶ್ಲೇಷಣೆಯಲ್ಲಿ 129 ಪ್ರದೇಶಗಳ ಅಂದಾಜು 2.8 ಲಕ್ಷ ಜನರನ್ನು ಒಳಗೊಂಡಿದ್ದೇವೆ. ಅವರಲ್ಲಿ ಸುಮಾರು 43,000 ಜನರು ನಗರ ಮೊಹಲ್ಲಾಗಳಲ್ಲಿ ವಾಸಿಸುತ್ತಿದ್ದರು ಮತ್ತು ಉಳಿದವರು ಗ್ರಾಮೀಣ ಪ್ರದೇಶಗಳಿಗೆ ಸೇರಿದವರು. ಅಂದರೆ, ಸಮೀಕ್ಷೆಗೆ ಸರಿಸುಮಾರು 85% ರಷ್ಟು ಗ್ರಾಮೀಣ ಪ್ರದೇಶವನ್ನು ಆಧರಿಸಲಾಗಿದೆ. ಇದು ಒಟ್ಟಾರೆಯಾಗಿ ಉತ್ತರ ಪ್ರದೇಶವನ್ನು ಪ್ರತಿಬಿಂಬಿಸುತ್ತದೆ. ಸರ್ಕಾರದ ಅಂದಾಜಿನ ಪ್ರಕಾರ, ಇಲ್ಲಿನ ಜನಸಂಖ್ಯೆಯ ಸುಮಾರು 76% ಗ್ರಾಮೀಣ ಭಾಗದಲ್ಲಿ ವಾಸಿಸುತ್ತಾರೆ.

ಫಲಿತಾಂಶಗಳು

2017 ರಿಂದ ಆಗಸ್ಟ್ 2021 ರವರೆಗೆ 129 ಪ್ರದೇಶಗಳಲ್ಲಿ ದಾಖಲಾದ ಸಾವಿನ ಸಂಖ್ಯೆಯನ್ನು ಈ ಕೆಳಗಿನ ಕೋಷ್ಟಕದಲ್ಲಿ ನೋಡಬಹುದು.

ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಈ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾದ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ನಾವು ಮೊದಲು ಗಮನಿಸುತ್ತೇವೆ. ವಾಸ್ತವವಾಗಿ, ದಾಖಲಾದ ಸಾವುಗಳು 2017 ಮತ್ತು 2018 ರ ನಡುವೆ 9% ರಷ್ಟು ಹೆಚ್ಚಾಗಿದೆ. 2018 ಮತ್ತು 2019 ರ ನಡುವೆ ಇನ್ನೂ 23% ಹೆಚ್ಚಾಗಿದೆ. ದಾಖಲೆಯ ಸುಧಾರಣೆಯೇ ಇದಕ್ಕೆ ಕಾರಣ ಎನ್ನಬಹುದು.

“ಗ್ರಾಮದಲ್ಲಿ ಎಲ್ಲಾ ಸಾವುಗಳ ದಾಖಲೆಯನ್ನು ನಿರ್ವಹಿಸುವುದಿಲ್ಲ” ಎಂದು ಅಧಿಕಾರಿಯೊಬ್ಬರು ಸಮೀಕ್ಷಾ ತಂಡಕ್ಕೆ ತಿಳಿಸಿರುವುದು ಮತ್ತೊಂದು ವಾಸ್ತವ ಸಂಗತಿ. ಮರಣ ಪ್ರಮಾಣಪತ್ರವನ್ನು ಪಡೆಯಲು ಯಾರಾದರೂ ಬಂದಲ್ಲಿ ಮಾತ್ರ ಸತ್ತವರ ನೋಂದಣಿಯಾಗಿರುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ಸಾಮಾನ್ಯವಾಗಿ ಪಿಂಚಣಿ ಪ್ರಯೋಜನಗಳು, ಜೀವ ವಿಮಾ ಹಕ್ಕುಗಳು, ಆಸ್ತಿ ವಿಚಾರ ಮತ್ತು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿರುವ ಕಾರಣಗಳಿಗಾಗಿ ಕುಟುಂಬಗಳು ಮರಣ ಪ್ರಮಾಣಪತ್ರವನ್ನು ಪಡೆಯಲು ಬಯಸುತ್ತವೆ.

ಕಾಲಾನಂತರದಲ್ಲಿ, ಹೆಚ್ಚು ಹೆಚ್ಚು ಕುಟುಂಬಗಳು ಸ್ಥಳೀಯ ಅಧಿಕಾರಿಗಳಿಗೆ ಸಾವುಗಳನ್ನು ವರದಿ ಮಾಡಲು ಇಚ್ಛಿಸಿದ ಸಾಧ್ಯತೆ ಇದೆ. ಸಾಂಕ್ರಾಮಿಕ ಅವಧಿಯಲ್ಲಿ, ದಾಖಲಾದ ಸಾವುಗಳಲ್ಲಿ ಮತ್ತಷ್ಟು ತೀಕ್ಷ್ಣವಾದ ಏರಿಕೆಗಳನ್ನು ನಾವು ನೋಡುತ್ತೇವೆ…

“2017-2019ರಲ್ಲಿ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಕಚ್ಚಾ ಸಾವಿನ ದರ (CDR) ಏರಿಕೆಯಾಗಿದೆ” ಎಂದು ಗಮನಿಸಬಹುದು. ಅಂದರೆ ಸಾವಿನ ನೋಂದಣಿಯು ಹೆಚ್ಚಾಗಿರಬಹುದು. ಬಹುಶಃ ಮರಣ ಪ್ರಮಾಣ ಹೆಚ್ಚಿರುವುದಿಲ್ಲ.

2019ರ ಮಾದರಿ ನೋಂದಣಿ ವ್ಯವಸ್ಥೆಯ (SRS) ಬುಲೆಟಿನ್‌ ಪ್ರಕಾರ, ಉತ್ತರ ಪ್ರದೇಶದ ನಿಜವಾದ CDR ದರ 6.5 (ಗ್ರಾಮೀಣ ಪ್ರದೇಶಗಳಲ್ಲಿ 6.9 ಮತ್ತು ನಗರ ಪ್ರದೇಶಗಳಲ್ಲಿ 5.3). ಸಮೀಕ್ಷೆ ಮಾಡಲಾದ ಪ್ರದೇಶಗಳಲ್ಲಿ CDR 6.7 ಎಂದು ನಾವು ನಿರೀಕ್ಷಿಸುತ್ತೇವೆ.

ಈ ಪ್ರದೇಶಗಳಲ್ಲಿ 2020ರಲ್ಲಿನ CDR ಸುಮಾರು 15-20% ಹೆಚ್ಚಾಗಿದೆ. 2021ರ ಜನವರಿ-ಆಗಸ್ಟ್ ಸಮಯದಲ್ಲಿ ಸಾವಿನ ಪ್ರಮಾಣವು, ಆಘಾತಕಾರಿಯಾಗಿ, ನಿರೀಕ್ಷೆಗಿಂತ ಎರಡು ಪಟ್ಟು ಹೆಚ್ಚಿದೆ.

ಉತ್ತರ ಪ್ರದೇಶದಲ್ಲಿ ಸಾಂಕ್ರಾಮಿಕ-ಪೂರ್ವ ವಾರ್ಷಿಕ ಸಾವುಗಳನ್ನು ಎಸ್‌ಆರ್‌ಎಸ್ ಗಮನಾರ್ಹವಾಗಿ ಕಡಿಮೆ ಅಂದಾಜು ಮಾಡಿದೆ ಎಂದು ನಾವು ಭಾವಿಸಿದರೂ, ಸಾಂಕ್ರಾಮಿಕ ಅವಧಿಯಲ್ಲಿ ದಾಖಲೆ ಸುಧಾರಿಸಿದೆ ಎಂದು ಭಾವಿಸಿದರೂ (ಇದು ಅತ್ಯಂತ ಅಸಂಭವ ಸಂಗತಿ, ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿ ಸಾವಿನ ನೋಂದಣಿಗೆ ದೊಡ್ಡ ಅಡ್ಡಿ ಉಂಟಾಗಿತ್ತು), ಸಾಂಕ್ರಾಮಿಕ ಅವಧಿಯಲ್ಲಿನ ಸಾವುಗಳು ನಿರೀಕ್ಷೆಗಿಂತ ಹೆಚ್ಚಿನದಾಗಿದೆ.

2021ರ ಜನವರಿ-ಆಗಸ್ಟ್‌ನಲ್ಲಿ ಸಾವುಗಳಲ್ಲಿ ನಾಟಕೀಯ ಹೆಚ್ಚಳವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಂಡು ಬಂದಿದೆ. ವಾಸ್ತವವಾಗಿ, 2021ರ ಮೊದಲ ಎಂಟು ತಿಂಗಳುಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಸಾವುಗಳು 2019ರ ದತ್ತಾಂಶಕ್ಕೆ ಹೋಲಿಸಿದರೆ ದ್ವಿಗುಣವಾಗಿವೆ.

ನಾವು ಭೇಟಿ ನೀಡಿದ ಪೂರ್ವಾಂಚಲದ ಭಾಗಗಳಲ್ಲಿನ ಪರಿಸ್ಥಿತಿಯು ರಾಜ್ಯದ್ಯಾಂತ ಪ್ರತಿಫಲಿಸುತ್ತದೆಯೇ ಎಂದು ನಾವು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ನಾವು ಕೇಳಬಹುದು: ಸಮೀಕ್ಷೆ ಮಾಡಿದ ಪ್ರದೇಶಗಳಲ್ಲಿ ಕಂಡುಬರುವ ಮರಣದ ಉಲ್ಬಣವು ರಾಜ್ಯದಾದ್ಯಂತ ಪುನರಾವರ್ತಿತವಾಗಿದ್ದರೆ, ಉತ್ತರ ಪ್ರದೇಶದಲ್ಲಿ ಸಾಂಕ್ರಾಮಿಕ ಸಂದರ್ಭದ ಸಾವುಗಳ ಪ್ರಮಾಣ ಏನನ್ನು ಸೂಚಿಸುತ್ತದೆ?

ಪ್ರತ್ಯಕ್ಷದರ್ಶಿಗಳ ಹೇಳಿಕೆ

ಡೇಟಾದಲ್ಲಿನ ವರದಿಗಳನ್ನು ಬಹು ಸಾಕ್ಷ್ಯಗಳಿಂದ ದೃಢೀಕರಿಸಲಾಗಿದೆ. ಅಂಕಿಅಂಶಗಳನ್ನು ಸಂಗ್ರಹಿಸಿದ ಸಮಾಜ ವಿಜ್ಞಾನ ಸಂಶೋಧಕಿ ಮುನಿಜಾ ಖಾನ್, “ಈ ನಾಲ್ಕು ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆಯು ನಮಗೆ ಆಘಾತ ತಂದಿದೆ. COVID-19ನಿಂದ ಒಬ್ಬ ವ್ಯಕ್ತಿ ಸಾವನ್ನಪ್ಪದ ಒಂದೇ ಒಂದು ಮನೆಯೂ ನಮಗೆ ತಿಳಿದಿಲ್ಲ ಎಂದು ಆಶಾ ಕಾರ್ಯಕರ್ತೆಯರು, ಪಂಚಾಯತ್ ಮುಖ್ಯಸ್ಥರು ಹೇಳುತ್ತಾರೆ” ಎಂದು ತಿಳಿಸಿದ್ದಾರೆ.

ಆದಿಕೇಶವ ಘಾಟ್‌ನಲ್ಲಿ ದುಃಖಿತ ಕುಟುಂಬಗಳು ಹೇಗೆ ಸೇರುತ್ತವೆ ಎಂಬುದನ್ನು ಖಾನ್ ನೆನಪಿಸಿಕೊಂಡರು. “ಸೋಂಕಿನಿಂದ ಸಾವನ್ನಪ್ಪಿದ ಜನರ ದೇಹಗಳನ್ನು ಅವರ ಅಂತಿಮ ವಿಧಿಗಾಗಿ ಇಲ್ಲಿಗೆ ತರಲಾಗುತ್ತಿತ್ತು. ಪ್ರೀತಿಪಾತ್ರರನ್ನು ಬೀಳ್ಕೊಡಲು ತಮ್ಮ ಸರದಿಯನ್ನು ಕಾಯುವ ಕುಟುಂಬಗಳಿಂದ ಈ ಸ್ಥಳವು ತುಂಬಿ ಹೋಗಿತ್ತು. ಆದರೆ ಕಾರ್ಯಕರ್ತರು ಶವಸಂಸ್ಕಾರಕ್ಕಾಗಿ ಉರುವಲು ಹುಡುಕಲು ಹೆಣಗಾಡಿದರು. ಅಂತಿಮವಾಗಿ ಉರುವಲು ಖಾಲಿಯಾದವು. ಸರಿಯಾಗಿ ಸುಡದ ದೇಹಗಳನ್ನು ಗಂಗೆಗೆ ಎಸೆಯಲಾಯಿತು” ಎಂದು ಅವರು ನೆನಪಿಸಿಕೊಂಡರು.

ಆಸ್ಪತ್ರೆಗಳು ಮತ್ತು ಸ್ಮಶಾನಗಳು ಮಾತ್ರವಲ್ಲ. ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಖಬರ್‌ಸ್ಥಾನಗಳಲ್ಲಿಯೂ ಉದ್ದನೆಯ ಸಾಲುಗಳು ಇದ್ದವು. ಉದ್ಯೋಗಿಗಳು ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದರು. ಜಾಗ ಖಾಲಿಯಾದಾಗಲೂ ಸಮಾಧಿಗಳನ್ನು ಅಗೆಯುತ್ತಿದ್ದರು. ಜನರು ಹೊರಗೆ ಕಾಯುತ್ತ ನಿಲ್ಲುತ್ತಿದ್ದರು. ನಗರ ಪ್ರದೇಶದ ಸಮೀಪವಿರುವ ರಾಮನಗರದ ಕಾರ್ಮಿಕರೊಬ್ಬರು ಸಿಜೆಪಿ ತಂಡದೊಂದಿಗೆ ಮಾತನಾಡುತ್ತಾ, “ನಾನು ದಿನವಿಡೀ ಅಗೆದರೂ ಸ್ಮಶಾನದ ಹೊರಗೆ ಜನರು ಕಡಿಮೆಯಾಗಲಿಲ್ಲ” ಎಂದಿದ್ದಾರೆ.

ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರು ತಮ್ಮ ಸತ್ತವರನ್ನು ಸಮಾಧಿ ಮಾಡುವ ಸ್ಥಳಗಳು ದೇಹಗಳಿಂದ ತುಂಬಿರುವುದು ಕಂಡುಬಂದಿದೆ. ಸತ್ತವರ ಸಂಖ್ಯೆ ಹೆಚ್ಚಾದಂತೆ ಹಳೆಯ ಸಮಾಧಿಗಳನ್ನು ‘ಮರುಬಳಕೆ’ ಮಾಡಬೇಕಾಗಿತ್ತು.

ದುರ್ಬಲ ಆರೋಗ್ಯ ಮತ್ತು ಮೂಲಸೌಕರ್ಯದ ಕೊರತೆ ಸಮಸ್ಯೆಯನ್ನು ಜಟಿಲವಾಗಿಸಿತು. ಪರಿಹಾರ ಕಾರ್ಯದ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳನ್ನು ಹೇಗೆ ಆಗಾಗ್ಗೆ ಮುಚ್ಚಲಾಗಿದೆ ಎಂಬುದನ್ನು ಸಿಜೆಪಿ ತಂಡ ಗಮನಿಸಿದೆ. ಒಬ್ಬ ಹಿರಿಯ ವ್ಯಕ್ತಿ ಡಾ.ಖಾನ್‌ಗೆ ಹೇಳಿದ್ದು: “ಕಳೆದ ಎರಡು ವರ್ಷಗಳು ನನ್ನ ಜೀವನದ ಅತ್ಯಂತ ಆಘಾತಕಾರಿ ವರ್ಷಗಳು. ನಾನು ಈ ಸಮಯವನ್ನು ನೆನಪಿಟ್ಟುಕೊಳ್ಳಲು ಬಯಸುವುದಿಲ್ಲ.”

 ಕೊನೆಯ ಮಾತು

ವಾರಣಾಸಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸಾಂಕ್ರಾಮಿಕ ಸಮಯದಲ್ಲಿ ಸಾವಿನ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾದದ್ದನ್ನು ಸಮೀಕ್ಷೆ ಗುರುತಿಸಿದೆ.

ಎರಡನೇ ಅಲೆಯ ಸಮಯದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. 2020ರ ಸಮಯದಲ್ಲಿ ಹೆಚ್ಚುವರಿ ಸಾವುಗಳು ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವಂತೆ ತೋರುತ್ತಿದ್ದರೂ, ನಾವು ಸಮೀಕ್ಷೆ ಮಾಡಿದ ಗ್ರಾಮೀಣ ಪ್ರದೇಶಗಳು ಸಹ 2019ಕ್ಕಿಂತ 2020ರಲ್ಲಿ ಸುಮಾರು 20% ಹೆಚ್ಚಿನ ಸಾವುಗಳನ್ನು ನೋಡಿವೆ.

ಮತ್ತೊಂದೆಡೆ 2020ರ ಮೊದಲ ಭಾಗದಲ್ಲಿ ರಾಷ್ಟ್ರೀಯ ಲಾಕ್‌ಡೌನ್ ಸಮಯದಲ್ಲಿ ಹಲವಾರು ಕಚೇರಿಗಳು ಮುಚ್ಚಲ್ಪಟ್ಟಿರುವುದರಿಂದ ದೇಶದಲ್ಲಿನ ಸಾವಿನ ಪ್ರಮಾಣದ ನೋಂದಣಿ ಕುಸಿದಿರುವುದನ್ನು ಗಮನಿಸಬಹುದು.

ನಾವು ಸಮೀಕ್ಷೆ ಮಾಡಿದ ಜನಸಂಖ್ಯೆಯು ಮುಖ್ಯವಾಗಿ ವಾರಣಾಸಿ ಜಿಲ್ಲೆಯ ಸುತ್ತಲೂ ಕೇಂದ್ರೀಕೃತವಾಗಿದ್ದರೂ, ಇಡೀ ಉತ್ತರ ಪ್ರದೇಶ ರಾಜ್ಯವು ವಿಶೇಷವಾಗಿ ಎರಡನೇ ಅಲೆಯ ಸಮಯದಲ್ಲಿ ಬಹಳವಾಗಿ ಹೊಡೆತ ತಿಂದಿದೆ ಎಂದು ಇಲ್ಲಿನ ದತ್ತಾಂಶಗಳು ಹೇಳುತ್ತವೆ.

ವರದಿ ಕೃಪೆ: ದಿ ವೈರ್‌

The original piece may be read here

 

Leave a Reply

This site uses Akismet to reduce spam. Learn how your comment data is processed.

Go to Top
Nafrat Ka Naqsha 2023